ಗ್ರಾಂಟ್, ಚಾರಲ್ಸ್

	1746 - 1827. ರಾಜಕಾರಣಿ ಹಾಗೂ ಸಮಾಜ ಸುಧಾರಕ. 1767ರಲ್ಲಿ ತನ್ನ ಚಿಕ್ಕಪ್ಪನೊಡನೆ ಭಾರತಕ್ಕೆ ಬಂದು ಈಸ್ಟ್ ಇಂಡಿಯ ಕಂಪನಿಯಲ್ಲಿ ಉನ್ನತ ಹುದ್ದೆಯನ್ನು ಗಳಿಸಿದ. ಭಾರತದಲ್ಲಿರುವ ವರೆಗೂ ದೇಶೀಯ ಸಮಾಜ ಸುಧಾರಣೆಯಲ್ಲಿ ತುಂಬ ಆಸಕ್ತಿ ವಹಿಸಿದ. ಸ್ವದೇಶಕ್ಕೆ ಮರಳಿದ ಮೇಲೆ ಚರ್ಚ್ ಮಿಷನರಿ ಸೊಸೈಟಿ (1799), ಆಂಗ್ಲ ಮತ್ತು ವಿದೇಶೀಯ ಬೈಬಲ್ ಸಂಸ್ಥೆಗಳನ್ನು (1804) ತೆರೆದ. ಭಾರತಕ್ಕೆ ವಿಶೇಷ ಸಂಖ್ಯೆಯಲ್ಲಿ ಮಿಷನರಿಗಳನ್ನು ಕಳುಹಿಸಬೇಕೆಂದು ಬ್ರಿಟಿಷ್ ಸರ್ಕಾರವನ್ನು ಒತ್ತಾಯಪಡಿಸಿದ. ಏಷ್ಯದ ವಸಾಹತುಗಳಲ್ಲಿರುವ ಜನರ ನೈತಿಕತೆಯನ್ನು ಉತ್ತಮಪಡಿಸುವ ಗ್ರಂಥವೊಂದನ್ನು (1792) ಪ್ರಕಟಿಸಿದ. ತತ್ಪರಿಣಾಮವಾಗಿ ಬ್ರಿಟಿಷ್ ಸರ್ಕಾರ ಒಬ್ಬ ಬಿಷಪನನ್ನು ನೇಮಿಸಿದ್ದಲ್ಲದೆ ಭಾರತದ ವಿದ್ಯಾಭಿವೃದ್ಧಿಗಾಗಿ 50,000 ಪೌಂಡುಗಳನ್ನು ಮಂಜೂರು ಮಾಡಿತು. ಆಮೇಲೆ ಗ್ರಾಂಟ್ ದೇಶೀಯರಿಗೆ ಕೈಗಾರಿಕಾ ತರಬೇತಿಯನ್ನು ಕೊಡಬೇಕೆಂಬ ಸಲಹೆಯನ್ನು ಮಾಡಿ ಈಸ್ಟ್ ಇಂಡಿಯ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಸೂಕ್ತ ಶಿಕ್ಷಣವನ್ನು ಒದಗಿಸಬೇಕೆಂದು ಶಿಫಾರಸ್ಸು ಮಾಡಿದ. ಈತ 1803 ಮತ್ತು 1818ರ ವರೆಗೆ ಬ್ರಿಟಿಷ್ ಪಾರ್ಲಿಮೆಂಟಿನ ಸದಸ್ಯನಾಗಿದ್ದ. 

	ಭಾರತೀಯರಿಗೆ ಇಂಗ್ಲೀಷ್ ಭಾಷೆಯನ್ನು ಬೋಧಿಸಬೇಕು. ತನ್ಮೂಲಕ ಇಂಗ್ಲೀಷ್ ಸಾಹಿತ್ಯದ ವಿಶಿಷ್ಟತೆಯ ಪರಿಚಯ ಮಾಡಿಕೊಡಬೇಕು. ಕ್ರಮೇಣ ಭಾರತೀಯರಿಗೆ ಆಂಗ್ಲರ ಸಂಸ್ಕøತಿ ಮತ್ತು ಧಾರ್ಮಿಕ ಜ್ಞಾನವನ್ನು ಪರಿಚಯಿಸಬೇಕು. - ಎನ್ನುವುದೇ ಗ್ರಾಂಟನ ಶೈಕ್ಷಣಿಕ ಧೋರಣೆಗಳ ಮುಖ್ಯತತ್ತ್ವಗಳು. ಇವು ಮುಂದೆ ಮಕಾಲೆಯ (1800 - 1859) ನಾಯಕತ್ವದಲ್ಲಿ ಕಾರ್ಯಗತಗೊಂಡವು.								(ಕೆ.ಎಸ್.ಎಸ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ